ತೀಬ್ಸ್ 1

	ಪ್ರಾಚೀನ ಈಜಿಪ್ಟ್ ಸಾಮ್ರಾಜ್ಯದ ರಾಜಧಾನಿಗಳಲ್ಲೊಂದು; ಈಗ ಪಾಳುನಗರ. ಕೈರೂ ನಗರಕ್ಕೆ ಸುಮಾರು 419 ಮೈಲಿ ದೂರದಲ್ಲಿ, ಆಧುನಿಕ ಕೀನ್ಯದ ದಕ್ಷಿಣಕ್ಕೆ, ನೈಲ್ ನದಿಯ ಎಡದಂಡೆಯ ಮೇಲಿದೆ. 11ನೆಯ ರಾಜವಂಶದ ಕಾಲದಿಂದ (ಕ್ರಿ. ಪೂ. 2160- ಕ್ರಿ. ಪೂ. 2000) ಇದು ಮೇಲಿನ ಈಜಿಪ್ಟಿನ ರಾಜಧಾನಿಯಾಗಿ ಮೆರೆಯಿತು. ಪ್ರಾಚೀನ ಕಾಲದಲ್ಲಿ ಈ ನಗರ ನೈಲ್ ನದಿಯ ಪೂರ್ವದಂಡೆಯ ಮೇಲಿದ್ದು. ಪಶ್ಚಿಮದಂಡೆಯಲ್ಲಿ ಗೋರಿ ಸ್ಥಾನವಿತ್ತು. ಈ ನಗರದ ಮುಖ್ಯಭಾಗ ಐತಿಹಾಸಿಕ ಮಹತ್ತ್ವವುಳ್ಳ ಕಾರ್ನಾಕ್ ದೇವಾಲಯ ಸಮುದಾಯವೆಂದು ಹೇಳಬಹುದು (ನೋಡಿ- ಕಾರ್ನಾಕ್-2) 17ನೆಯ ಹಾಗೂ 18ನೆಯ ರಾಜವಂಶಗಳ ಕಾಲದಲ್ಲಿ ಈ ನಗರ ಅತ್ಯಂತ ಪ್ರಮುಖ ಕೇಂದ್ರವಾಯಿತು. ಈ ಕಾಲದಲ್ಲಿ ನಿರ್ಮಿತವಾದ ಗೋರಿಗಳು ಸಮಕಾಲೀನ ಆರ್ಥಿಕ, ಕಲಾತ್ಮಕ ಹಾಗೂ ವಾಸ್ತುಶಿಲ್ಪದ ಔನ್ನತ್ಯ ಮತ್ತು ಉತ್ಕøಷ್ಟತೆಯನ್ನು ಪ್ರತಿಬಿಂಬಿಸುತ್ತವೆ. ಆದರೆ, 2ನೆಯ ರ್ಯಾಮ್ಸೀಸನ ಅನಂತರ ತೀಬ್ಸ್ ಈಜಿಪ್ಟಿನ ಹಲವು ರಾಜಧಾನಿಗಳಲ್ಲೊಂದಾಯಿತು. ಅನೇಕ ಮುತ್ತಿಗೆಗಳು ಹಾಗೂ ದಂಗೆಗಳು ನಡೆದ ಅನಂತರ ಅಗಸ್ಟಸನ ಆಳ್ವಿಕೆಯ ಕಾಲದಲ್ಲಿ ಅಂತಿಮವಾಗಿ ಈ ನಗರ ನಾಶಗೊಂಡಿತು. ಈಗಲೂ ಈ ನಗರದ ಭಗ್ನಾವಶೇಷಗಳು ವಿಶ್ವದಲ್ಲೆ ಮನ್ನಣೆ ಗಳಿಸಿವೆ; ಪ್ರೇಕ್ಷಣಿಯವಾಗಿವೆ. ಕಾರ್ನಾಕ್‍ನ ಅಮುನ್-ರಾ ದೇವತೆಯ ಬೃಹದ್ದೇವಾಲಯ, ಅದರ ವಿಶಾಲ ಸ್ತಂಭಗಳು 2ನೆಯ ರ್ಯಾಮ್ಸೀಸನ ಕಾಲದ ಹಜಾರ ಹಾಗೂ ರಾಣಿ ಹಾಟ್‍ಷೆಷ್‍ಸೂಟ್ ಮತ್ತು 2ನೆಯ ತೂಟ್ ಮೋಸೆಯ ಒಬೆಲಿಸ್ಕ್‍ಗಳು(ನೋಡಿ- ಒಬೆಲಿಸ್ಕ್) ಪ್ರಸಿದ್ಧವಾಗಿವೆ. ಮುತ್, ಖಾಸು ಹಾಗೂ ಲುಕ್ಷರ್ ದೇವಾಲಯಗಳಿಗೆ ಸ್ಫಿಂಕ್ಸ್‍ಗಳ ಸಾಲುಗಳು ಸಂಬಂಧ ಕಲ್ಪಸಿವೆ. 2ನೆಯ ಆಮೆನ್ ಹೋಟೆಪನ ಸಮಾಧಿಯೂ ಸೇರಿದಂತೆ ಗೋರಿಗಳ ಮುಂದೆ ದೇವಾಲಯಗಳ ದೀರ್ಘ ಸಾಲೊಂದಿದೆ. ಅದು ಮೆಯಾನ್‍ನ ಮತ್ತು 2ನೆಯ ರ್ಯಾಮ್ಸೀಸನ ಬೃಹತ್ ವಿಗ್ರಹಗಳನ್ನೊಳಗೊಂಡ ರ್ಯಾಮೇಸಿಯಮ್‍ಗಳಿಂದ ಕೂಡಿದೆ. ಸಮೀಪದ ಡೇರ್- ಎಲ್- ಮೆದಿನಾದಲ್ಲಿ ಅಡಿಗುಡ್ಡದಲ್ಲಿ ಟಾಲಮಿಯ ದೇವಾಲಯವಿದೆ. ಹಾಗೆಯೇ ಡೇರ್- ಎಲ್- ಬಹ್ರಿಯಲ್ಲಿ ರಾಣಿ ಹಾಟ್‍ಷೆಪ್‍ಸೂಟಳ ಕಾಲದಲ್ಲಿ ಬೆಟ್ಟವನ್ನು ಕಡಿದು ನಿರ್ಮಿಸಲಾದ ದೇವಾಲಯವೊಂದುಂಟು.

ಈ ನಗರದ ಕೀರ್ತಿ ಗ್ರೀಕರಲ್ಲೂ ಹರಡಿತ್ತು. ಹೋಮರ್ ಮಹಾ ಕವಿ ನೂರು ದ್ವಾರಗಳ ತೀಬ್ಸ್ ನಗರದ ಸಂಪತ್ತನ್ನು ವರ್ಣಿಸುತ್ತಾನೆ. ಕ್ರಿ.ಪೂ. 661ರಲ್ಲಿ ಅಸುರ ಬನಿಪಾಲನ ಅಸ್ಸೀರಿಯನರು ಈ ನರಗರವನ್ನು ಲೂಟಿ ಹೊಡೆದರು. ಮತ್ತೆ ಸೈಟರಿಂದ ಇದರ ಪುನರ್ ನಿರ್ಮಾಣವಾಯಿತಾದರೂ ಇದಕ್ಕೆ ಮೊದಲಿನ ಪ್ರಾಮುಖ್ಯ ಬರಲಿಲ್ಲ. ಅನಂತರ ಸಂಭವಿಸಿದ ಪರ್ಷಿಯನ್ ಯುದ್ಧಗಳಲ್ಲೂ ಇದು ಕಷ್ಟನಷ್ಟಗಳಿಗೆ ತುತ್ತಾಯಿತು. ನೂರಾರು ವಿಗ್ರಹಗಳನ್ನು ದೇವಾಲಯಗಳಿಂದ ಸಂಗ್ರಹಿಸಿ ಹೊಂಡವೊಂದರಲ್ಲಿ ಹುಗಿದಿಡಲಾಗಿತ್ತು. 1903ರಲ್ಲಿ ಜಿ. ಲೆಗ್ರೈನ್ ಈ ವಿಗ್ರಹಗಳನ್ನು ಪತ್ತೆ ಹಚ್ಚಿದ. ಗ್ರೀಕ್ ಭೂಗೋಳಶಾಸ್ತ್ರಜ್ಞ ಸ್ಟ್ರಾಬೋನ (ಕ್ರಿ. ಪೂ. 63 ? — ಕ್ರಿ . ಶ ? 21) ಕಾಲಕ್ಕೆ ಈ ನಗರ ಭಗ್ನಾವಶೇಷಗಳಿಂದ ಕೂಡಿದ ಒಂದು ಗ್ರಾಮವಾಗಿತ್ತು. ಪ್ರವಾಸಿಗಳು ಪಾಳುನಗರವನ್ನು ನೋಡಲು ಬರುತ್ತಿದ್ದರು.									  (ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ